ಗ್ರ್ಯಾನ್ಯುಲೈಟ್ -

ಸಮಗಾತ್ರದ ಖನಿಜಕಣಗಳಿಂದ ರಚಿತವಾದ ರೂಪಾಂತರ ಶಿಲಾವಿಶೇಷ. ಅಗ್ನಿಶಿಲೆಗಳು, ಜಲಜಶಿಲೆಗಳು ಮತ್ತು ರೂಪಾಂತರ ಶಿಲೆಗಳು ಕೂಡ ಗ್ರ್ಯಾನ್ಯುಲೈಟುಗಳಾಗಿ ಮಾರ್ಪಡಬಹುದು. ಚದರ ಸೆಂಟಿಮೀಟರಿಗೆ 8,000 ಕಿಲೊಗ್ರಾಮುಗಳಿಗೂ ಮೀರಿದ ಒತ್ತಡ ಮತ್ತು 5000 ಸೆಂ. ಗೂ ಮೀರಿದ ಉಷ್ಣತೆ ಒದಗಿದಾಗ ಉಂಟಾಗುವ ರೂಪಾಂತರ ಶಿಲಾಸಮುದಾಯಗಳಿವು. ನಿಸರ್ಗದಲ್ಲಿ ಸಾಮಾನ್ಯವಾಗಿ ಅತ್ಯಂತ ಕ್ಷಾರಶಿಲೆಗಳು ಬೃಹತ್ ಪ್ರಾದೇಶಿಕ ರೂಪಾಂತರಿತ ಗ್ರ್ಯಾನ್ಯುಲೈಟ್ ಶಿಲಾಪಂಕ್ತಿಗಳ ಗುಂಪಿನಲ್ಲಿ ದೊರೆಯುತ್ತವೆ. ಮೂಲಧಾತುಗಳನ್ನು ಅನುಸರಿಸಿ ಕ್ವಾಟ್ರ್ಜ್, ಸಿಲಿಮನೈಟ್, ಕಯನೈಟ್, ಆರ್ಥೋಕ್ಲೇಸ್, ಪ್ಲೇಜಿಯೊಕ್ಲೇಸ್, ಹೈಪರ್ಸ್‍ಥೀನ್, ಕ್ಯಾಲ್ಸೈಟ್, ಗಾರ್ನೆಟ್, ಎನ್‍ಸ್ಟಟೈಟ್, ಫಾರ್ಸ್‍ಟೆರೈಟ್, ಡಯಾಪ್ಸೈಡ್, ಹಾರ್ನ್‍ಬ್ಲೆಂಡ್, ಪೈರೋಪ್-ಆಮಂಡೈಟ್, ಗ್ರ್ಯಾನ್ಯುಲೈಟುಗಳು ಈ ಶಿಲೆಗಳಲ್ಲಿ ದೊರೆಯುವ ಪ್ರಮುಖ ಖನಿಜಕಣಗಳು ಕರ್ನಾಟಕದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿನ ರೂಪಾಂತರ ಶಿಲಾಪಂಕ್ತಿಗಳಲ್ಲಿ ಬಗೆಬಗೆಯ ಗ್ರ್ಯಾನ್ಯುಲೈಟುಗಳು ದೊರೆಯುತ್ತವೆ. ಇವು ಕಯನೈಟ್, ಕುರಂದ, ಬಳಪದಕಲ್ಲು, ಮ್ಯಾಗ್ನಸೈಟ್, ಕ್ರೋಮೈಟ್ ನಿಕ್ಕಲ್ ಮತ್ತು ಪ್ಲಾಟಿನಮ್ ಮುಂತಾದ ಲೋಹಾಲೋಹ ಗಣಿಗಳಿಗೆ ಆಧಾರವಾಗಿವೆ. ಅತಿಕ್ಷಾರ ಶಿಲೆಗಳು ಪರ್ವತಶ್ರೇಣಿಗಳ ಗರ್ಭವನ್ನು ಆಕ್ರಮಿಸಿರುವುದರಿಂದ ಗ್ರ್ಯಾನ್ಯುಲೈಟುಗಳಿಗೆ ಆಧುನಿಕ ಶಿಲಾಶಾಸ್ತ್ರದಲ್ಲಿ ಬಹಳ ಮಹತ್ತ್ವದ ಸ್ಥಾನ ಉಂಟು.				
(ಎಸ್.ಆರ್.ಎನ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ